ನಮ್ಮ ಪರಿಚಯ

ಭೂಮಾಪನ ಇಲಾಖೆಯ ಕಾರ್ಯಗಳುಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಹಳೆಯ ಮತ್ತು ಮಹತ್ವದ ಇಲಾಖೆ. ಈ ಇಲಾಖೆಯಲ್ಲಿ ಭೂಮಂಜೂರಾತಿ, ಭೂಪರಿವರ್ತನೆ, ಭೂಸ್ವಾಧೀನ, ಮ್ಯುಟೇಷನ್, ಭೂಸುಧಾರಣೆ ಪೋಡಿ ಪ್ರಕರಣಗಳು. ಹದ್ದುಬಸ್ತು, ಕೋರ್ಟ್ ಕಮಿಷನ್ ಮತ್ತು ಕೋರ್ಟ್ ಡಿಕ್ರಿ ಪ್ರಕರಣಗಳ ಅಳತೆ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಅತ್ಯಮೂಲ್ಯ ದಾಖಲೆಗಳು ಮತ್ತು ನಕ್ಷೆಗಳನ್ನು ಸಂರಕ್ಷಿಸುವ ಕಾರ್ಯವನ್ನು ಇಲಾಖೆಯು ನಿರ್ವಹಿಸುತ್ತಿದೆ. ಸರ್ಕಾರದ ಆದೇಶ ಸಂಖ್ಯೆ ಕಂಇ 20 ಭೂದಾಸ 2002 ಬೆಂಗಳೂರು ದಿನಾಂಕ. 21-04-2005ರ ಆದೇಶದ ಮೇರೆಗೆ ಭೂಮಾಪನ ಇಲಾಖೆಯನ್ನು ಕಂದಾಯ ಇಲಾಖೆಯೊಂದಿಗೆ 01-05-2005 ರಿಂದ ಕಾರ್ಯವಿಲೀನಗೊಳಿಸಿದ ಅನ್ವಯ ಸರ್ವೆ ಸಿಬ್ಬಂದಿ, ತಹಶೀಲ್ದಾರ್ ರ ನಿಯಂತ್ರಣದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಭೂಮಾಪನ ಇಲಾಖೆಯ ಹಾಲಿ ಪೋಡಿ ಪ್ರಕರಣಗಳ ಕಾಲೋಚಿತ ಕೆಲಸಗಳನ್ನು ಹೊರತುಪಡಿಸಿ ಇತರ ಮೂಲ ಕೆಲಸಗಳಾದ ನಗರಮಾಪನ, ಮೂಲ ಸರ್ವೆ, ರಿವಿಜನ್ ಸರ್ವೆ, ರೀಸರ್ವೆ, ತರಬೇತಿ, ನಕಾಶೆ ಮುದ್ರಣ, ಲ್ಯಾಮಿನೇಷನ್, ಗಣಕೀಕರಣ, ಇತರೆ ಆಧುನೀಕರಣ, ಅಂತರ ರಾಜ್ಯಗಳ ನಡುವಿನ ಗಡಿಗಳ ಅಳತೆ, ಶಾಸನಬದ್ಧ ಅಧಿಕಾರದಡಿ ರಿವಿಜನ್ ಮತ್ತು ಮೇಲ್ಮನವಿ ಪ್ರಕರಣಗಳ ನಿರ್ವಹಣೆ ಕೆಲಸವನ್ನು ಭೂಮಾಪನ ಆಯುಕ್ತರ ಅಧೀನದಲ್ಲಿಯೇ ಮುಂದುವರೆಸಲಾಗುತ್ತಿದೆ. ಕಂದಾಯ ನಿರ್ಣಯ : ಭೂಮಾಪನ ಕಾರ್ಯದ ನಂತರ ಇಲಾಖೆಯ ಮತ್ತೊಂದು ಮಹತ್ವದ ಕಾರ್ಯವಾದ ಕಂದಾಯ ನಿರ್ಣಯವನ್ನು ಸಹ ಮಾಡಿ ಪ್ರತಿ ಹಿಡುವಳಿ ಜಮೀನಿಗೂ ಸರ್ಕಾರ ನಿಗಧಿಪಡಿಸುವ ದರದಂತೆ ಕಂದಾಯವನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ. 2ನೇ ಪರಿಷ್ಕೃತ ಕಂದಾಯ ದರವನ್ನು 1965 ರಿಂದ ಚಾಲ್ತಿಗೊಳಿಸಲಾಗಿದ್ದು, ಇದರ ಅವಧಿಯು 1995ಕ್ಕೆ ಮುಕ್ತಾಯಗೊಂಡಿದ್ದರೂ 3ನೇ ಕಂದಾಯ ಪರಿಷ್ಕರಣೆ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲದಿರುವುದರಿಂದ ಸರ್ಕಾರವು 1965ರ ಕಂದಾಯ ನಿರ್ಣಯ ದರಗಳನ್ನೇ ಮುಂದುವರಿಸಿದೆ. ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ಇದಕ್ಕೆ ಸಂಬಂಧಪಟ್ಟ ಪ್ರಕಟಣೆಯನ್ನು ಮಾಹಿತಿಗಾಗಿ ಸುತ್ತೋಲೆಗಳ ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಇಲಾಖೆಯು ಭೂಮಾಪನ ಮತ್ತು ಕಂದಾಯ ನಿರ್ಣಯದಂತಹ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಮಹತ್ವದ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದು ಈ ದಾಖಲೆಗಳನ್ನು ಸಹ ಕ್ರಮಬದ್ಧವಾಗಿ ನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿ ಮೂಲ ಸರ್ವೆ ಕೈಗೊಂಡ ಕಾಲದಿಂದಲೂ ಅಂದರೆ ಸುಮಾರು 140 ವರ್ಷಗಳ ಹಳೆಯದಾದ ದಾಖಲೆಗಳಿಂದ ಹಿಡಿದು ಇತ್ತೀಚಿಗೆ ಬದಲಾವಣೆಯಿಂದ ಕಾಲೋಚಿತಗೊಳ್ಳುತ್ತಿರುವ ದಾಖಲೆಗಳವರೆಗೂ ಎಲ್ಲಾ ದಾಖಲೆಗಳನ್ನು ಕಂದಾಯ ಇಲಾಖೆಯ ತಾಲ್ಲೂಕು ಕಛೇರಿಯಲ್ಲಿ ಭೂಮಾಪನ ಶಾಖೆಯಲ್ಲಿ ತಹಶೀಲ್ದಾರ್ ರವರ ಉಸ್ತುವಾರಿಯಲ್ಲಿ ನಿರ್ವಹಿಸಲಾಗುವುದಲ್ಲದೆ ಕೋರಿಕೆಯ ಮೇರೆಗೆ ಸಾರ್ವಜನಿಕರಿಗೆ ಧೃಢೀಕೃತ ನಕಲುಗಳನ್ನು ಸಹ ಪೂರೈಸಲಾಗುತ್ತಿದೆ.