ನಮ್ಮ ಪರಿಚಯ

ಭೂಮಾಪನ ಇಲಾಖೆಯ ಕಾರ್ಯಗಳುಈ ಇಲಾಖೆಯ ವಿವಿಧ ಪೋಡಿ ಪ್ರಕರಣಗಳು, ಹದ್ದುಬಸ್ತು ಪ್ರಕರಣಗಳು, ಕೋರ್ಟ್ ಡಿಕ್ರಿ / ಕೋರ್ಟ್ ಕಮಿಷನ್ ಪ್ರಕರಣಗಳನ್ನು ನಿರ್ವಹಿಸುತ್ತದೆ. ಮೈಸೂರಿನಲ್ಲಿ ಹಾಗೂ ಗುಲ್ಬರ್ಗಾದಲ್ಲಿ ತರಬೇತಿ ಸಂಸ್ಥೆಗಳನ್ನು ಹೊಂದಿದ್ದು ಭೂಮಾಪನ ವಿಷಯದಲ್ಲಿ ತರಬೇತ ನೀಡಲಾಗುತ್ತಿದೆ. ಮರುಭೂಮಾಪನ ಹಾಗೂ ನಗರಮಾಪನ ಕಾರ್ಯಗಳನ್ನು ಕೈಗೊಂಡಿದೆ. 100 ವರ್ಷಕ್ಕೂ ಹಳೆಯದಾದ ದಾಖಲೆಗಳ ಸಂರಕ್ಷಣೆ ಮತ್ತು ನಕಾಶೆಗಳ ತಯಾರಿಕೆ ಇಲಾಖೆಯ ಮುಖ್ಯ ಕಾರ್ಯವಾಗಿದೆ.

ಪೋಡಿ ಪ್ರಕರಣಗಳು : ಇಲಾಖೆಯಲ್ಲಿ ನಿರ್ವಹಿಸುತ್ತಿರುವ ವಿವಿಧ ಪೋಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ದಾಖಲೆಗಳನ್ನು ತಯಾರಿಸಲಾಗುತ್ತಿದೆ. ಭೂಮಂಜೂರಾತಿ, ಭೂಪರಿವರ್ತನೆ, ಮ್ಯುಟೇಷನ್, ಭೂಸುಧಾರಣೆ ಕಡತಗಳು ಅಳತೆಗಾಗಿ ಕಂದಾಯ ಶಾಖೆಯಿಂದ ಸ್ವೀಕೃತವಾಗುವ ಪ್ರಕರಣಗಳಾಗಿರುತ್ತದೆ. ಸದರಿ ಪ್ರಕರಣಗಳಲ್ಲಿ ಅಗತ್ಯ ದಾಖಲೆಗಳು (ಮಂಜೂರಾತಿ ಆದೇಶ, ರೆವಿನ್ಯೂ ಸ್ಕೆಚ್, ಶುಲ್ಕ ಪಾವತಿಸಿದ ರಶೀದಿ, ಮ್ಯುಟೇಷನ್ ದಾಖಲೆ, ಪರಿವರ್ತನಾ ಆದೇಶ) ಇತ್ಯಾದಿ ಇರುವ ಬಗ್ಗೆ ಪರಿಶೀಲಿಸಿ ಸಮರ್ಪಕವಾಗಿದ್ದಲ್ಲಿ ಅಳತೆಗಾಗಿ ಭೂಮಾಪಕರಿಗೆ ವಿತರಿಸಲಾಗುತ್ತದೆ. ಅಳತೆ ಕೆಲಸ ಪೂರೈಸಿದ ಭೂಮಾಪಕರು, ಭೂಮಂಜೂರಾತಿ ಪ್ರಕರಣಗಳಲ್ಲಿ ಟಿಪ್ಪಣಿ, ಪಕ್ಕಾ, ಖಾಯಂದರತ:ಖ್ತೆ, ಕಮ್ಮಿಜಾಸ್ತಿ ಪತ್ರಿಕೆ, ಆಕಾರಬಂದ್ ದಾಖಲೆಗಳನ್ನು ತಯಾರಿಸಿ ಕಂದಾಯ ನಿಗಧಿಪಡಿಸುತ್ತಾರೆ. ಮಂಜೂರಾತಿ ವಿಸ್ತೀರ್ಣ ಹೆಚ್ಚು ಕಮ್ಮಿ ಆಗಿದ್ದಲ್ಲಿ ಮತ್ತು ಸ್ಥಳ ಬದಲಾವಣೆಯಾದಲ್ಲಿ ನ್ಯೂನ್ಯತೆಗಳನ್ನು ಕಂದಾಯ ಶಾಖೆಯಿಂದ ಸರಿಪಡಿಸಿದ ನಂತರ ಇಂಡೀಕರಣದ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಂತೆಯೇ ಭೂಪರಿವರ್ತನೆ, ಭೂಸುಧಾರಣೆ, ಮ್ಯುಟೇಷನ್ ಪ್ರಕರಣಗಳಲ್ಲಿ ಮ್ಯುಟೇಷನ್ ವಿಸ್ತೀರ್ಣ ಮತ್ತು ಭೂಪರಿವರ್ತನಾ ವಿಸ್ತೀರ್ಣಕ್ಕೆ ತಾಳೆ ಇಟ್ಟು ಅನುಭವದಂತೆ ಹೊಸ ಹಿಸ್ಸೆಗಳನ್ನು ವಿಭಜಿಸಿ ಹಿಸ್ಸಾ ನಂಬರು ನೀಡಿ ಹಿಸ್ಸಾ ಟಿಪ್ಪಣಿ, ಆರ್.ಆರ್.ಪಕ್ಕಾ, ಅಟ್ಲಾಸ್, ಫಾರಂ ನಂ. 10 ಮತ್ತು ಆಕಾರಬಂದ್ ತಯಾರಿಸಲಾಗುತ್ತದೆ. ಭೂಸ್ವಾಧೀನ ಪ್ರಕರಣಗಳಲ್ಲಿ ಸ್ವಾಧೀನವಾಗಬೇಕಾದ ಪ್ರದೇಶದ ನಕ್ಷೆಯೊಂದಿಗೆ ಭೂಸ್ವಾಧೀನ ಅಧಿಕಾರಿಗಳ ನಕ್ಷೆಯ ಆಧಾರದ ಮೇಲಿ ಜಂಟಿ ಅಳತೆ ಕೆಲಸ ಪೂರೈಸಿ ಟಿಪ್ಪಣಿ, ಪಕ್ಕಾ, ಜೆ.ಎಂ.ಸಿ.ಸ್ಕೆಚ್, ಹೆಚ್ಚು ಕಮ್ಮಿ ತ:ಖ್ತೆ ಮತ್ತಿತರೆ ದಾಖಲೆಗಳನ್ನು ತಯಾರಿಸಲಾಗುತ್ತದೆ.

ಹದ್ದಬಸ್ತು ಪ್ರಕರಣಗಳು :ಹದ್ದಬಸ್ತು ಪ್ರಕರಣಗಳಲ್ಲಿ ಸರ್ವೆ ನಂಬರ್ ಅಥವಾ ಹಿಸ್ಸಾ ನಂಬರಿನ ಗಡಿ ನಿರ್ಧರಿಸುವ ಬಗ್ಗೆ ಭೂಮಾಪನ ಶಾಖೆಯಲ್ಲಿ ಅರ್ಜಿಯನ್ನು ನಿಗಧಿತ ಶುಲ್ಕದೊಡನೆ ಸ್ವೀಕೃತವಾಗಿ ಮೂಲ ಟಿಪ್ಪಣಿ / ಹಿಸ್ಸಾ ಟಿಪ್ಪಣಿ ಆಧಾರದ ಮೇಲೆ ಗಡಿಯನ್ನು ನಿಗಧಿ ಮಾಡಿ ಹದ್ದುಬಸ್ತು ಸ್ಕೆಚ್ ತಯಾರಿಸಿ ವತ್ತುವರಿ ಇದ್ದಲ್ಲಿ ಸ್ಕೆಚ್ ನಲ್ಲಿ ತೋರಿಸಲಾಗುತ್ತದೆ.

ಡಿಕ್ರಿ / ಕೋರ್ಟ್ ಕಮಿಷನ್ ಪ್ರಕರಣಗಳು : ಸದರಿ ಪ್ರಕರಣಗಳು ನ್ಯಾಯಾಲಯದಿಂದ ಅಳತೆಗಾಗಿ ಬರುವ ಪ್ರಕರಣಗಳಾಗಿದ್ದು ಸದರಿ ಕಡತಗಳಲ್ಲಿ ಕೋರ್ಟ್ ಡಿಕ್ರಿ ಆದೇಶದ ಪ್ರಕಾರ ಮತ್ತು ಕೋರ್ಟ್ ಆದೇಶದ (Memo of Instructions) ದಂತೆಯೇ ಕಾರ್ಯನಿರ್ವಹಿಸಿ ಅಗತ್ಯ ದಾಖಲೆಗಳನ್ನು ತಯಾರಿಸಿ ನಿಗಧಿತ ದಿನಾಂಕದೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕಿರುತ್ತದೆ.

ತರಬೇತಿ ಸಂಸ್ಥೆ, ಮೈಸೂರು ಮತ್ತು ಗುಲ್ಬರ್ಗಾ : ಕೇಂದ್ರ ಸರ್ಕಾರದ ಹಾಗೂ 10ನೇ ಹಣಕಾಸು ಆಯೋಗದ ಹಣಕಾಸು ನೆರವಿನೊಡನೆ ತರಬೇತಿ ಸಂಸ್ಥೆ, ಶಿಕ್ಷರ್ಣಾಥಿಗಳ ವಸತಿ ಗೃಹಗಳು ನಿರ್ಮಾಣವಾಗಿರುತ್ತದೆ. ಈ ಸಂಸ್ಥೆಗಳಲ್ಲಿ ತರಬೇತಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಅಲ್ಲದೇ ಐ.ಎ.ಎಸ್, ಕೆ.ಎ.ಎಸ್ ಮತ್ತು ಅನ್ಯ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳಿಗೂ ಕೂಡ ಆಧುನಿಕ ಅಳತೆ ತಂತ್ರಜ್ಞಾನ ಬಳಸುವ ಬಗ್ಗೆ ಉತ್ತಮ ತರಬೇತಿ ನೀಡಲಾಗುತ್ತಿದೆ.

ಮರುಭೂಮಾಪನ : ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕಂದಾಯ ಆಡಳಿತವನ್ನು ಬಲಪಡಿಸುವ ಹಾಗೂ ದಾಖಲೆಗಳನ್ನು ತಹಲ್ ವರಗೂ ಸಿದ್ದಪಡಿಸುವ ಕಾರ್ಯಕ್ರಮದ ಅಡಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯಲ್ಲಿ ಮರುಭೂಮಾಪನ ಕಾರ್ಯವನ್ನು ಪ್ರಾಯೋಗಿಕವಾಗಿ ಅತ್ಯಾಧುನಿಕ ಸರ್ವೆ ಉಪಕರಣವಾದ ಟೋಟಲ್ ಸ್ಟೇಷನ್ ದಿಂದ 33 ಗ್ರಾಮಗಳ ಅಳತೆ ಕೆಲಸ ಪ್ರಾರಂಭಿಸಿದ್ದು ಈಗ ಮುಕ್ತಾಯದ ಹಂತದಲ್ಲಿದೆ.

ಕಾರ್ಯ ಚಟುವಟಿಕೆಗಳು : ನಗರಮಾಪನ ಕಾರ್ಯವು ಇಲಾಖೆಯ ಅಧೀನದಲ್ಲಿಯೇ ಮುಂದುವರೆದಿದ್ದು, ಪ್ರಸ್ತುತ ರಾಜ್ಯದ 48 ನಗರ / ಪಟ್ಟಣಗಳಲ್ಲಿ ನಗರಮಾಪನ ನಿರ್ವಹಣೆ ಕಾರ್ಯವು ಜಾರಿಯಲ್ಲಿದೆ. ಜಾರಿಯಲ್ಲಿರುವ 48 ನಗರ ಪಟ್ಟಣಗಳ ನಿರ್ವಹಣೆಯನ್ನು ಗಣಕೀಕರಣಗೊಳಿಸಲು ಹಾಗೂ ಸದರಿ ನಗರಮಾಪನವನ್ನು ರಾಜ್ಯದ ಇನ್ನೂ 177 ನಗರ / ಪಟ್ಟಣಗಳಿಗೆ ನಗರಮಾಪನವನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಅಗತ್ಯ ಯೋಜನಾ ವರದಿಗಳನ್ನು ಸಿದ್ಧಪಡಿಸಿ ಅನುಮತಿ ಹಾಗೂ ಹಣ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 12ನೇ ಹಣಕಾಸು ಆಯೋಗದ ಅನುದಾನದಾಡಿಯಲ್ಲಿ ರಾಜ್ಯದ ಆಯ್ದ 20 ನಗರ / ಪಟ್ಟಣ / ಗ್ರಾಮ ಪ್ರದೇಶಗಳಲ್ಲಿ ಹೊಸದಾಗಿ ನಗರಮಾಪನ ಕೈಗೊಳ್ಳುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ನಗರಮಾಪನ ಜಾರಿಯಲ್ಲಿರುವ 41 ಪಟ್ಟಣ ಪ್ರದೇಶಗಳಿಗೆ ಹೊಸದಾಗಿ ಸೇರ್ಪಡೆಯಾಗಿರುವ ವ್ಯಾಪ್ತಿಯನ್ನು ನಗರಮಾಪನಕ್ಕೆ ಅಳವಡಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ.