ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಅಧಿಕಾರಿಗಳ ಮತ್ತು ಭೂಮಾಕರುಗಳ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ತೋರಿಸುವ ತ

 

1. ಆಯುಕ್ತರ ಕಛೇರಿ

 

1. ಆಯುಕ್ತರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳು (ಭಾ.ಆ.ಸೇ ಶ್ರೇಣಿ)

ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಇವರು ರಾಜ್ಯದಲ್ಲಿ ಮೂಲ ಹಾಗು ಪರಿಷ್ಕ್ರತ ಕಂದಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಭೂಕಂದಾಯ  ನೀತಿ ನಿಯಮ ಮತ್ತು ಆದೇಶಗಳನ್ನು ಸರ್ಕಾರದ ಪರವಾಗಿ ಕಾರ್ಯಗತಗೊಳಿಸಲು ಜವಾಬ್ದಾರರಾಗಿರುತ್ತಾರೆ  ಹಾಗೂ ಎಲ್ಲಾ ನಗರ ಪಟ್ಟಣಗಳಲ್ಲಿ ನಗರಮಾಪನ ಕಾರ್ಯವನ್ನು ಜಾರಿಗೊಳಿಸಲು ಸಹ ಅಧಿಕಾರವುಳ್ಳವರಾಗಿರುತ್ತಾರೆ ಮತ್ತು ಇಲಾಖೆಯ ಭೂದಾಖಲಾತಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕೆಲಸದ ಉಸ್ತುವಾರಿಯನ್ನು ಸಹ ನೋಡಿಕೊಳ್ಳುತ್ತಾರೆ. ಕಂದಾಯ  ಇಲಾಖೆಯ  ಹಾಗೂ ಇತರ ಭೂಮಾಪನಕ್ಕೆ ಸಂಬಂಧಿಸಿದ  ಇಲಾಖೆಗಳೊಂದಿಗೆ ಸಮನ್ವಯ ಮತ್ತು ಆಂತರಿಕ ಸಂಬಂಧವನ್ನು ಸಹ ಸ್ಥಾಪಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ.  ಹಕ್ಕು ದಾಖಲಾತಿಗಳ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಸಲಹೆಗಳನ್ನು ನೀಡುವ ಅಧಿಕಾರ ಹೊಂದಿರುತ್ತಾರೆ.

 

                ಇಲಾಖಾ ಮುಖ್ಯಸ್ಥರ ಅಧಿಕಾರ ಹೊಂದಿರುವ ಇವರು ಪತ್ರಾಂಕಿತವಲ್ಲದ ಹುದ್ದೆಗಳನ್ನು  ತುಂಬುವುದು ಮತ್ತು ‘ಸಿ’ ಮತ್ತು ‘ಡಿ’ ಗುಂಪಿನ ವರ್ಗದ ನೌಕರರಿಗೆ ಮುಂಬಡ್ತಿ  ನೀಡಿ ತುಂಬುವ  ಆದೇಶವನ್ನು ನೀಡಲು ಅಧಿಕಾರ ಹೊಂದಿರುತ್ತಾರೆ ಹಾಗೂ ‘ಬಿ’ ‘ಸಿ’ ಮತ್ತು ‘ಡಿ’ ಗುಂಪಿನ ನೌಕರರ ವರ್ಗಾವಣೆ  ಮಾಡುವುದು ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲುಗಳ) ನಿಯಮಗಳನ್ವಯ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿರುತ್ತಾರೆ.

ಇವರು (1) ಕರ್ನಾಟಕ ಆರ್ಥಿಕ ಸಂಹಿತೆ (2) ಸಾದಿಲ್ವಾರು ವೆಚ್ಚದ ಕೈಪಿಡಿ (3) ಆರ್ಥಿಕ ಅಧಿಕಾರದ ಕೈಪಿಡಿ ಮತ್ತು (4) ವಿಶೇಷ ಆರ್ಥಿಕ ಅಧಿಕಾರ ಮತ್ತು ನಿಯಮಗಳಡಿಯಲ್ಲಿ ಆರ್ಥಿಕ ಅಧಿಕಾರ ಚಲಾಯಿಸಲು ಅಧಿಕಾರ ಹೊಂದಿರುತ್ತಾರೆ. ಆಯುಕ್ತರು ಅಪೀಲು ವಿಚಾರಣಾ ಪ್ರಾಧಿಕಾರಿಯಾಗಿರುತ್ತಾರೆ.

 

2.ಭೂದಾಖಲೆಗಳ ಜಂಟಿ ನಿರ್ದೆಶಕರು (ತಾಂತ್ರಿಕ ) (ಕ್ಲಾಸ್ -1 ಶ್ರೇಣಿ)                                                                                              

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲಾತಿ ವಿಷಯಗಳ ಹಾಗೂ ಇತರ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಆಯುಕ್ತರಿಗೆ ನೆರವಾಗಲು ಇವರು ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸದರಿಯವರು ಇಲಾಖೆಯ ನಕಾಶೆ ಮತ್ತು ಮುದ್ರಣ ವಿಭಾಗಗಳ ಕೆಲಸ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.

ಸದರಿ ಅಧಿಕಾರಿಯು ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಾರ್ಯಚಟುವಟಿಕೆಗಳ ಪ್ರಗತಿಯ ಪುನರ್ವಿಲೋಕನೆ ಮಾಡುತ್ತಾರೆ.

 

3.ಭೂದಾಖಲೆಗಳ ಜಂಟಿ ನಿರ್ದೆಶಕರು(ವಿಚಾರಣೆ ಮತ್ತು ತನಿಖೆ) (ಕ್ಲಾಸ್ -1 ಶ್ರೇಣಿ)

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ  ಅಧೀನದ ಕಛೇರಿಗಳ ಹಾಗೂ ಇಲಾಖೆಯ ಅಧೀನದ ಭೂಮಾಪನ ಶಾಖೆಯ ತನಿಖೆ ಹಾಗೂ ಶಿಸ್ತು ಪ್ರಕರಣಗಳ ವಿಚಾರಣಾ ಕಾರ್ಯ ನಿರ್ವಹಿಸುವುದು. ತರಬೇತಿ, ಮೂಲ ದಾಖಲೆಗಳ ಸಂರಕ್ಷಣೆ ಹಾಗೂ ಪರವಾನಗಿ ಭೂಮಾಪಕರ ಯೋಜನೆ  ಕಾರ್ಯ ಮೇಲ್ವಿಚಾರಣೆ ಕೆಲಸ ನಿರ್ವಹಿಸುತ್ತಾರೆ.

 

4.ಭೂದಾಖಲೆಗಳ ಸಹಾಯಕ ನಿರ್ದೆಶಕರು(ತಾಂತ್ರಿಕ)  

ಈ ಅಧಿಕಾರಿಯು ತಾಂತ್ರಿಕ, ನಕಾಶೆ ಮತ್ತು ನಕಾಶೆ ದಾಖಲೆ ವಿಷಯಗಳಿಗೆ ಸಂಬಂಧಿಸಿದಂತೆ ಆಯುಕ್ತರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.ಆಯುಕ್ತರ ಕಛೇರಿಯ ತಾಂತ್ರಿಕ, ನಕಾಶೆ ಮತ್ತು ನಕಾಶೆ ದಾಖಲೆ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುತ್ತಾರೆ. ಅಧೀನ ಕಛೇರಿಗಳೊಂದಿಗೆ ಪತ್ರ ವ್ಯವಹಾರಗಳನ್ನು ಆಯುಕ್ತರ ಪರವಾಗಿ ನಡೆಸಲು ಅಧಿಕಾರ ಉಳ್ಳವರಾಗಿರುತ್ತಾರೆ.

 

5.ಆಧೀಕ್ಷರು (ಕಾರ್ಯನಿರ್ವಾಹಕ)

ತಾಂತ್ರಿಕ  ಮತ್ತು ನಕಾಶೆ ದಾಖಲೆ ಶಾಖೆಯ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೆಶಕರು(ತಾಂ) ಮತ್ತು ಭೂದಾಖಲೆಗಳ ಜಂಟಿ ನಿರ್ದೆಶಕರು ತಾಂತ್ರಿಕ  ಇವರಿಗೆ  ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ.

 

6.ಪರ್ಯಾವೇಕ್ಷಕರು

             ತಾಂತ್ರಿಕ  ಶಾಖೆಯಲ್ಲಿ ಕೆಲಸ ನಿರ್ವಹಣೆ ಹಾಗೂ ತಾಂತ್ರಿಕ ಶಾಖೆಯ ಮೇಲಾಧಿಕಾರಿಗಳ ಆದೇಶದಂತೆ ಕೆಲಸ ನಿರ್ವಹಿಸುತ್ತಾರೆ.

7.ಅಧೀಕ್ಷಕರು (ನಕಾಶೆ)

             ನಕಾಶೆಗಾರರ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಅವರುಗಳ ಕೆಲಸದ ಶೇಕಡವಾರು ತಪಾಸಣೆ ನಿರ್ವಹಿಸುತ್ತಾರೆ. ನಕಾಶೆಗಳ ತಯಾರಿಕೆಯ ಗುಣಮಟ್ಟ ಕಾಯ್ದುಕೊಳ್ಳಲು ಜವಾಬ್ದಾರರಾಗಿರುತ್ತಾರೆ. ನಕಾಶೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಆಳವಡಿಸಲು ಸಹ ಜವಾಬ್ದಾರರಾಗಿರುತ್ತಾರೆ.

 

8.ಪರ್ಯಾವೇಕ್ಷಕರು (ನಕಾಶೆ)

ನಕಾಶೆಗಾರರ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಹಾಗೂ  ಅಧೀಕ್ಷಕರು (ನಕಾಶೆ)  ಇವರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ.

 

9.ಪ್ರಥಮ ದರ್ಜೆ ನಕಾಶೆಗಾರರು

ಇವರುಗಳು ಕೇಂದ್ರ ಕಛೇರಿಯ ನಕಾಶೆ ವಿಭಾಗದಲ್ಲಿ ಕಾರ್ಯನಿರ್ವಹಿಸುವರು. ರಾಜ್ಯದಲ್ಲಿನ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ನಕಾಶೆಗಳನ್ನು ತಯಾರಿಸುವರು.

 

10.ಎರಡನೇ ದರ್ಜೆ ನಕಾಶೆಗಾರರು

ಇವರುಗಳು ಕೇಂದ್ರ ಕಛೇರಿಯ ನಕಾಶೆ ವಿಭಾಗದಲ್ಲಿ ಕಾರ್ಯನಿರ್ವಹಿಸುವರು. ರಾಜ್ಯದಲ್ಲಿನ ಗ್ರಾಮ ತಾಲ್ಲೂಕು ಹಾಗೂ ಜಿಲ್ಲಾ ನಕಾಶೆಗಳನ್ನು ತಯಾರಿಸುವರು.

 

11.ಭೂದಾಖಲೆಗಳ ಉಪ ನಿರ್ದೆಶಕರು (ಆಡಳಿತ)

            ಇವರು  ಆಯುಕ್ತರ  ಕೇಂದ್ರ ಸ್ಥಾನಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಆಯುಕ್ತರ ಪರವಾಗಿ ಆಡಳಿತ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸದರಿಯವರು ಸಿಬ್ಬಂದಿ ಶಾಖೆ, ವಿಲೇವಾರಿ ಶಾಖೆಯ ಕೆಲಸ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳತ್ತಾರೆ. 

 

12.ಭೂದಾಖಲೆಗಳ ಸಹಾಯಕ ನಿರ್ದೆಶಕರು(ಆಡಳಿತ)

ಈ ಅಧಿಕಾರಿಯು ಆಡಳಿತ ಮತ್ತು ಸಿಬ್ಬದಿ ವಿಷಯಗಳಿಗೆ ಸಂಬಂಧಿಸಿದಂತೆ ಆಯುಕ್ತರಿಗೆ ಸಹಾಯಕರಾಗಿ  ಕಾರ್ಯನಿರ್ವಹಿಸುತ್ತಾರೆ. ಆಯುಕ್ತರ ಕಛೇರಿಯ ಸಿಬ್ಬಂದಿ ವರ್ಗದ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುತ್ತಾರೆ. ಅಧೀನ ಕಛೇರಿಗಳೊಂದಿಗೆ ಪತ್ರ ವ್ಯವಹಾರಗಳನ್ನು  ಆಯುಕ್ತರ ಪರವಾಗಿ ನಡೆಸಲು ಅಧಿಕಾರವುಳ್ಳವರಾಗಿರುತ್ತಾರೆ.

 

13.ಅಧೀಕ್ಷಕರು (ಆಡಳಿತ)

ಸಿಬ್ಬಂದಿ ಶಾಖೆಯ ವಿಷಯಗಳಿಗೆ ಸಂಬಂದಿಸಿದಂತೆ ವಿಷಯ ನಿರ್ವಾಹಕರುಗಳ ಮೇಲುಸ್ತುವಾರಿ ಹಾಗೂ ಭೂದಾಖಲೆಗಳ ಉಪ ನಿರ್ದೆಶಕರು(ಆಡಳಿತ) ಮತ್ತು  ಭೂದಾಖಲೆಗಳ ಸಹಾಯಕ ನಿರ್ದೆಶಕರು(ಆಡಳಿತ)ಇವರ ಮಾರ್ಗದರ್ಶನದಂತೆ ಕೆಲಸ ನಿರ್ವಹಿಸುತ್ತಾರೆ.

 

14.ಲೆಕ್ಕಾಧಿಕಾರಿಗಳು

ಆಯುಕ್ತರ ಪರವಾಗಿ ಲೆಕ್ಕ ಶಾಖೆಯ  ಮತ್ತು ಉಗ್ರಾಣ ಶಾಖೆಯ ಕಾರ್ಯವನ್ನು ನಿರ್ವಹಿಸುತ್ತಾರೆ. ಸದರಿಯವರು ಲೆಕ್ಕ ಶಾಖೆ, ಉಗ್ರಾಣ ಮತ್ತು  ಮುದ್ರಣ ಶಾಖೆಯ ಕೆಲಸ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಅನುದಾನಗಳ ಪಡೆಯುವಿಕೆ, ವೆಚ್ಚ ಮತ್ತು  ನಿಯಂತ್ರಣ ಹಾಗೂ ಯೋಜನಾ ಕಾರ್ಯಗಳಿಗೆ ಸಂಬಂದಿಸಿದಂತೆ ಭೂದಾಖಲೆಗಳ ಜಂಟಿ ನಿರ್ದೆಶಕರು (ತಾಂ) ಇವರೊಂದಿಗೆ ಸಮಾಲೋಚಿಸಿ ಪ್ರಸ್ತಾವನೆಗಳನ್ನು ಸಲ್ಲಿಸುವ ಜವಾಬ್ದಾರಿ ಹೊಂದಿರುತ್ತಾರೆ.                  

                  

 15.ಭೂದಾಖಲೆಗಳ ಸಹಾಯಕ ನಿರ್ದೆಶಕರು(ಲೆಕ್ಕ)

ಈ ಅಧಿಕಾರಿಯು ಲೆಕ್ಕ ವಿಷಯಗಳಿಗೆ ಸಂಬಂದಿಸಿದಂತೆ ಆಯುಕ್ತರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಆಯುಕ್ತರ ಕಛೇರಿಯ ಲೆಕ್ಕ ಶಾಖೆಯ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುತ್ತಾರೆ. ಅಧೀನ ಕಛೇರಿಗಳೊಂದಿಗೆ ಪತ್ರ ವ್ಯವಹಾರಗಳನ್ನು ಆಯುಕ್ತರ ಪರವಾಗಿ ನಡೆಸಲು ಅಧಿಕಾರ ಉಳ್ಳವರಾಗಿರುತ್ತಾರೆ.

 

16.ಭೂದಾಖಲೆಗಳ ಸಹಾಯಕ ನಿರ್ದೆಶಕರು(ಉಗ್ರಾಣ)

ಈ ಅಧಿಕಾರಿಯು ಉಗ್ರಾಣ ಮತ್ತು ಮುದ್ರಣ ವಿಷಯಗಳಿಗೆ ಸಂಬಂಧಿಸಿದಂತೆ ಆಯುಕ್ತರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಆಯುಕ್ತರ ಕಛೇರಿಯ ಉಗ್ರಾಣ ಮತ್ತು ಮುದ್ರಣ  ಶಾಖೆಗಳ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುತ್ತಾರೆ. ಅಧೀನ ಕಛೇರಿಗಳೊಂದಿಗೆ ಪತ್ರ ವ್ಯವಹಾರಗಳನ್ನು ಆಯುಕ್ತರ ಪರವಾಗಿ ನಡೆಸಲು ಅಧಿಕಾರ ಉಳ್ಳವರಾಗಿರುತ್ತಾರೆ.

 

ಆಯುಕ್ತರ ಕಛೇರಿಯ ಎಲ್ಲಾ ಶಾಖೆಗಳಲ್ಲಿ ಪ್ರಥಮ ದರ್ಜೆ ಸಹಾಯಕರು, ಎರಡನೇ ದರ್ಜೆ ಸಹಾಯಕರು, ಪ್ರಥಮ ದರ್ಜೆ ಭೂಮಾಪಕರು,  ಎರಡನೇ ದರ್ಜೆ ಭೂಮಾಪಕರು, ದಪ್ತರ್ ಬಂದ್, ಕಛೇರಿ ಜವಾನರು ಮತ್ತು ಬಾಂದು ಜವಾನರುಗಳು ಸಂಬಂಧಿಸಿದ ಶಾಖೆಯ ಮುಖ್ಯಸ್ಥರ ಆದೇಶದಂತೆ ವಿಷಯ ನಿರ್ವಹಣೆ ಹಾಗೂ ಇನ್ನಿತರೆ ಕೆಲಸಗಳನ್ನು ನಿರ್ವಹಿಸುತ್ತಾರೆ.2. ಇತರೆ ಅಧೀನ ಕಚೇರಿಗಳು

1) ಪ್ರಾಚಾರ್ಯರ ಕಛೇರಿ   

1. ಪ್ರಾಚಾರ್ಯರು ಭೂಮಾಪನ ಕಂದಾಯ ವ್ಯವಸ್ಥೆ ತರಬೇತಿ ಸಂಸ್ಥೆ, ಮೈಸೂರು ಮತ್ತು ಗುಲ್ಬರ್ಗ                                                                                                                                 

ಪ್ರಾಚಾರ್ಯರು ತರಬೇತಿ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ . ಸದರಿಯವರು ಭೂಮಾಪನ ಮತ್ತು ಕಂದಾಯ ವ್ಯವಸ್ಥೆ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖಾ  ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಜರುಗಿಸುತ್ತಾರೆ. ಇವರು ಆಯುಕ್ತರ ಪರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ ಭಾ.ಆ.ಸೇ. ಅಧಿಕಾರಿಗಳು, ಪ್ರೋಬೇಷನರಿ ಕ.ಆ.ಸೇ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರಗಳು ಇವರುಗಳಿಗೂ  ಸಹ  ಈ ಸಂಸ್ಥೆಯಲ್ಲಿ ಭೂಮಾಪನ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯ ಕೊನೆಯಲ್ಲಿ ಪ್ರತಿ ತಂಡಕ್ಕೂ ಪರೀಕ್ಷೆಗಳನ್ನು ಸಡೆಸುತ್ತಾರೆ.

 

2. ಭೂದಾಖಲೆಗಳ ಉಪ ನಿರ್ದೆಶಕರು (ತಾಂತ್ರಿಕ)

ಭೂದಾಖಲೆಗಳ ಉಪ ನಿರ್ದೆಶಕರು (ತಾಂತ್ರಿಕ)ರವರು ಗ್ರೂಪ್ ‘ಎ’ ತರಬೇತಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸದರಿಯವರು ಭೂಮಾಪನ ಮತ್ತು ಕಂದಾಯ ವ್ಯವಸ್ಥೆ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖಾ  ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ನೀಡುವಲ್ಲಿ ಇವರು ಪ್ರಾಚಾರ್ಯರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ.

 

3. ಭೂದಾಖಲೆಗಳ ಸಹಾಯಕ ನಿರ್ದೆಶಕರು(ತಾಂತ್ರಿಕ)

ಭೂದಾಖಲೆಗಳ ಸಹಾಯಕ ನಿರ್ದೆಶಕರು(ತಾಂತ್ರಿಕ) ರವರು ತರಬೇತಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸದರಿಯವರು ಭೂಮಾಪನ ಮತ್ತು ಕಂದಾಯ  ವ್ಯವಸ್ಥೆ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ನೀಡುವಲ್ಲಿ ಇವರು ಮೇಲಾಧಿಕಾರಿಗಳಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ.

 

ಭೂಮಾಪನ ಕಂದಾಯ ವ್ಯವಸ್ಥೆ ತರಬೇತಿ ಸಂಸ್ಥೆ,ಮೈಸೂರು ಮತ್ತು ಗುಲ್ಬರ್ಗ  ಕಛೇರಿಗಳಲ್ಲಿ ವಿವಿಧ ವೃಂದದ ಗ್ರೂಪ್ ‘ಸಿ’ ಮತ್ತು  ಗ್ರೂಪ್ ‘ಡಿ’ ವರ್ಗದ ನೌಕರರುಗಳು ಪ್ರಾಚಾರ್ಯರ ನಿರ್ದೇಶನದಂತೆ   ಕೆಲಸ ನಿರ್ವಹಿಸುತ್ತಾರೆ.

 

2) ನಗರಮಾಪನ ಕಛೇರಿಗಳು

1) ಭೂದಾಖಲೆಗಳ  ಜಂಟಿ ನಿರ್ದೆಶಕರು ನಗರಮಾಪನ ಉತ್ತರ ಮತ್ತು ದಕ್ಷಿಣ ವಲಯ (ಕ್ಲಾಸ್ 1 ಶ್ರೇಣಿ)

ಇವರುಗಳು ನಗರಮಾಪನ ಕಾರ್ಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಭೂಕಂದಾಯ ಅಧಿನಿಯಮ ಮತ್ತು ನಿಯಮಾವಳಿಗಳಲ್ಲಿ ಪ್ರದತ್ತವಾದ ಅಧಿಕಾರದಂತೆ ಅವರುಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮೈಸೂರು ಮತ್ತು ಬೆಳಗಾಂಗಳಲ್ಲಿ ವಲಯ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ಇವರ ಅಧೀನದಲ್ಲಿ ಬರುವ ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು, ನಗರಮಾಪನ ಕಚೇರಿಗಳ ಮೇಲುಸ್ತುವಾರಿ ಕಾರ್ಯನಿರ್ವಹಿಸುತ್ತಾರೆ.

 

2) ಭೂದಾಖಲೆಗಳ ಸಹಾಯಕ ನಿರ್ದೆಶಕರು(ಆಡಳಿತ)

ಇವರು ಭೂದಾಖಲೆಗಳ ಜಂಟಿ ನಿರ್ದೇಶಕರು (ನಗರಮಾಪನ) ರವರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಾರೆ. ಜಂಟಿ ನಿರ್ದೇಶಕರ ಪ್ರವಾಸದ ಅವಧಿಯಲ್ಲಿ ಕಚೇರಿಯ ಉಸ್ತುವಾರಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾರೆ.

 

3) ನಗರಮಾಪನ ವಿಚಾರಣಾಧಿಕಾರಿಗಳು

ಈ ಅಧಿಕಾರಿಗಳು ನಗರಾಸ್ತಿಗಳಿಗೆ ಸಂಬಂಧಿಸಿದಂತೆ ಆಸ್ತಿದಾರರ ಆಸ್ತಿಗಳ ಹಕ್ಕು ಭಾದ್ಯತೆಗಳ ವಿಚಾರಣೆ ಕಾರ್ಯನಿರ್ವಹಿಸಿ ಹಕ್ಕುದಾಖಲಾತಿಗಳನ್ನು ಸಿದ್ದಪಡಿಸುತ್ತಾರೆ. ಕರ್ನಾಟಕ ಭೂಕಂದಾಯ ನಿಯಮಗಳನುಸಾರ ಇವರು ಕಾರ್ಯ ನಿರ್ವಹಿಸುತ್ತಾರೆ.

 

4) ಭೂದಾಖಲೆಗಳ ಉಪ ನಿರ್ದೇಶಕರು (ನಗರಮಾಪನ)

ಈ ಅಧಿಕಾರಿಗಳು ನಗರಾಸ್ತಿಗಳಿಗೆ ಸಂಬಂಧಿಸಿದಂತೆ ಅಸ್ತಿದಾರರ ಆಸ್ತಿಗಳ ಹಕ್ಕುದಾರಿಕೆಯ ಬಗ್ಗೆ ಮೇಲ್ಮನವಿ ಹಾಗೂ ನಿಯಮ 139 ರ ಪ್ರಕಾರ 2 ನೇ ಮೇಲ್ಮನವಿ ಕಾರ್ಯ ನಿರ್ವಹಿಸುತ್ತಾರೆ. ಕರ್ನಾಟಕ ಭೂಕಂದಾಯ ನಿಯಮಗಳಿಗನುಸಾರ ಇವರು ಕಾರ್ಯ ನಿರ್ವಹಿಸುತ್ತಾರೆ ಹಾಗೂ ಅಧಿಕಾರ ಚಲಾಯಿಸುತ್ತಾರೆ ಮತ್ತು ತಮ್ಮ ಅಧೀನದ ನಗರಮಾಪನದ ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳ ಕಚೇರಿಯ ನಿಯಂತ್ರಣಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಾರೆ.

 

5) ಭೂದಾಖಲೆಗಳ ಸಹಾಯಕ ನಿರ್ದೇಶಕರು(ನಗರಮಾಪನ)

ಇವರು ಭೂದಾಖಲೆಗಳ ಉಪ ನಿರ್ದೇಶಕರು (ನಗರಮಾಪನ) ರವರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಾರೆ. ಕರ್ನಾಟಕ ಭೂಕಂದಾಯ ನಿಯಮಗಳಿಗನುಸಾರ ಇವರು ಕಾರ್ಯ ನಿರ್ವಹಿಸುತ್ತಾರೆ ಹಾಗೂ ಅಧಿಕಾರ ಚಲಾಯಿಸುತ್ತಾರೆ. ಹಾಗೂ ಈ ಅಧಿಕಾರಿಗಳು ಭೂದಾಖಲೆಗಳ ಜಂಟಿ ನಿರ್ದೇಶಕರು ಮತ್ತು ಭೂದಾಖಲೆಗಳ ಉಪ ನಿರ್ದೇಶಕರು ನಗರಮಾಪನ ರವರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಾರೆ.

 

3) ಜಿಲ್ಲಾಧಿಕಾರಿಗಳ ಕಚೇರಿ :

1) ಭೂಮಾಪನ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು

ಈ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಭೂಮಾಪನ ತಾಂತ್ರಿಕ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ.

 

2) ಭೂದಾಖಲೆಗಳ ಸಹಾಯಕ ನಿರ್ದೇಶಕರು (ಆಡಳಿತ)

ಇವರುಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲೆಯಲ್ಲಿನ ಭೂಮಾಪನ ಶಾಖೆಯ ನೌಕರರುಗಳ ಸೇವಾ ವಿಷಯದ ಬಗ್ಗೆ ಮೇಲುಸ್ತುವಾರಿ ಕಾರ್ಯ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಭೂಮಾಪನ ಸಿಬ್ಬಂದಿಯ ಕೆಲಸ ಕಾರ್ಯಗಳ ಪರಿಶೀಲನೆ ಹಾಗೂ ಮೇಲುಸ್ತುವಾರಿ.

 

3) ಅಧೀಕ್ಷಕರು (ಕಾ.ನಿ)

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂಮಾಪನ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರವರಿಗೆ ಸಹಾಯಕರಾಗಿ ಹಾಗೂ ಅವರ ಪ್ರವಾಸದ ಅವಧಿಯಲ್ಲಿ  ಅವರ ಪ್ರತಿನಿಧಿಯಾಗಿ ಮತ್ತು ತಾಂತ್ರಿಕ ಶಾಖೆಯ ಉಸ್ತುವಾರಿ ಕೆಲಸ ನಿರ್ವಹಣೆ, ತಾಂತ್ರಿಕ ಶಾಖೆಯ ಕೆಲಸದ ಮೇಲುಸ್ತುವಾರಿ.

4) ಉಪವಿಭಾಗಾಧಿಕಾರಿಗಳ ಕಚೇರಿ :

ಭೂದಾಖಲೆಗಳ ಸಹಾಯಕ ನಿರ್ದೇಶಕರು (ತಾಂತ್ರಿಕ)

ಇವರುಗಳು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಭೂಮಾಪನ ವಿಷಯಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.

 

5) ತಹಶೀಲ್ದಾರ್  ಕಚೇರಿ :

1) ಪರ್ಯಾವೇಕ್ಷಕರು

ಸದರಿಯವರು ತಮ್ಮ ವ್ಯಾಪ್ತಿಯಲ್ಲಿ ಬರುವ ಭೂಮಾಪಕರ ಕಾರ್ಯ ನಿರ್ವಹಣೆಯ ಪರಿಶೀಲನೆ ಮಾಡುತ್ತಾರೆ. ಅವರುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಜವಾಬ್ದಾರರಾಗಿರುತ್ತಾರೆ. ತಹಶೀಲ್ದಾರ್ ರವರಿಗೆ ತಾಂತ್ರಿಕ ವಿಷಯದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ತಮ್ಮ ಅಧೀನದ ಭೂಮಾಪಕರುಗಳ ದಫ್ತರ್ ತಪಾಸಣೆ ಕಾರ್ಯ ನಿರ್ವಹಿಸುತ್ತಾರೆ ಹಾಗೂ ಕಡತಗಳನ್ನು ಕ್ರಮಬದ್ದವಾಗಿ ನಿರ್ವಹಿಸಲು ಜವಾಬ್ದಾರರಾಗಿರುತ್ತಾರೆ. ಕ್ಲಿಷ್ಟಕರವಾದ ಪ್ರಕರಣಗಳಲ್ಲೂ ಭೂಮಾಪಕರುಗಳಿಗೆ ಮಾರ್ಗದರ್ಶನ ಮಾಡುತ್ತಾರೆ ಹಾಗೂ ಭೂಮಾಪಕರುಗಳಿಗೆ ನೀಡಲಾಗಿರುವ ಪ್ರಕರಣಗಳ ವಿಲೇವಾರಿಗೆ ಸಹ ಜವಾಬ್ದಾರರಾಗಿರುತ್ತಾರೆ. ನಕಲು ವಿತರಣೆ, ಪರವಾನಗಿ ಭೂಮಾಪಕರ ಕೆಲಸದ ಪರಿಶೀಲನೆ ಮಾಡುತ್ತಾರೆ.

 

2) ಪ್ರಥಮ ದರ್ಜೆ ಭೂಮಾಪಕರು

    ಸದರಿಯವರು ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸದರಿಯವರು ಭೂಸ್ವಾಧೀನ, ಅಲಿನೇಷನ್ ಹಾಗೂ ಇತರೆ ಮುಖ್ಯ ಪ್ರಕರಣಗಳನ್ನು ನಿರ್ವಹಿಸುತ್ತಾರೆ. ಭೂದಾಖಲೆಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ವಹಿಸಿದ ಕಾರ್ಯವನ್ನು ನಿರ್ವಹಿಸುತ್ತಾರೆ. ಅರ್ಜಿದಾರರಿಗೆ ತಮ್ಮ ಹಿಡುವಳಿಗೆ ಸಂಬಂಧಿಸಿದಂತೆ ಗಡಿ ತೋರಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಇತರೆ ಇಲಾಖೆಯಲ್ಲಿಯೂ ಅನ್ಯ ಸೇವೆಯಲ್ಲಿ ಕಾರ್ಯ ನಿರ್ವಹಿಸುವ ಪ್ರಥಮ ದರ್ಜೆ ಭೂಮಾಪಕರುಗಳು, ಭೂಮಾಪನ, ಭೂಸ್ವಾಧೀನ ಮೊದಲಾದ ಕೆಲಸಗಳಲ್ಲಿ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ವಿಸ್ತೀರ್ಣಗಳನ್ನು ಲೆಕ್ಕ ಮಾಡುವುದು, ನಕಾಶೆಗಳನ್ನು ತಯಾರಿಸುವುದು ಮುಂತಾದ ಕಾರ್ಯ ನಿರ್ವಹಿಸುತ್ತಾರೆ.

 

3) ದ್ವಿತೀಯ ದರ್ಜೆ ಭೂಮಾಪಕರು

ಇವರು ಇಲಾಖೆಯಲ್ಲಿ ಭೂಮಂಜೂರಾತಿ, ಭೂಸ್ವಾಧೀನ, ಅಲಿನೇಷನ್ ಮೊದಲಾದ ಪೋಡಿ ಕೆಲಸಕ್ಕೆ ಸಂಬಂಧಿಸಿದಂತೆ ಮೂಲ ಕಾರ್ಯವನ್ನು ನಿರ್ವಹಿಸುತ್ತಾರೆ. ಭೂದಾಖಲಾತಿಗಳನ್ನು ತಹಲ್ ವರೆಗೆ ಸಿದ್ದಪಡಿಸಲು ಜವಾಬ್ದಾರರಾಗಿರುತ್ತಾರೆ. ದಾಖಲಾತಿಗಳಲ್ಲಿ ಬದಲಾವಣೆ ಮೊದಲಾದವುಗಳನ್ನು ಅಳವಡಿಸುವ ಕಾರ್ಯ ನಿರ್ವಹಿಸುತ್ತಾರೆ. ಸರ್ವೆ ನಂಬರುಗಳಿಗೆ ಸಂಬಂಧಿಸಿದಂತೆ ಗಡಿ ತೋರಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಸದರಿಯವರು ಪ್ರತಿ ತಿಂಗಳೂ 15 ದಿವಸಗಳ ಪ್ರವಾಸ ಕೈಗೊಳ್ಳಬೇಕಾಗಿರುತ್ತದೆ ಹಾಗೂ ನಿಗದಿ ಪಡಿಸಿರುವ ಗುರಿಯನ್ನು ಸಾಧಿಸಬೇಕಾಗಿರುತ್ತದೆ.

 

4) ಪ್ರಥಮ ದರ್ಜೆ ಸಹಾಯಕರು

ಇವರುಗಳು ಸಂಬಂಧಪಟ್ಟ ತಹಶೀಲ್ದಾರ್ ರವರ ಕಚೇರಿಯಲ್ಲಿ ಕಾರ್ಯನಿರ್ವಹಿಸುವರು. ಭೂಮಾಪನ ಸಿಬ್ಬಂದಿ ಸಂಬಂಧಿಸಿದಂತೆ ಆಡಳಿತ, ಲೆಕ್ಕ ಪತ್ರ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವರು.

 

5) ಎರಡನೇ ದರ್ಜೆ ಸಹಾಯಕರು

ಇವರುಗಳು ಸಂಬಂಧಪಟ್ಟ ತಹಶೀಲ್ದಾರ್ ರವರ ಕಚೇರಿಯಲ್ಲಿ ಕಾರ್ಯನಿರ್ವಹಿಸುವರು. ಭೂಮಾಪನ ಸಿಬ್ಬಂದಿ ಸಂಬಂಧಿಸಿದಂತೆ ಆಡಳಿತ, ಲೆಕ್ಕ ಪತ್ರ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವರು.